Friday, June 8, 2012



                                              ಎನ್ .ವೆಂಕಟೇಶ್ ರಾವ್ 


ನಂದಿ ಹೋದ ಗಾಂಧೀ ಹಣತೆ 
ವರ್ಕಾಡಿಯ ಶಿಲ್ಪಿ : ಎನ್‌ . ವೆಂಕಟೇಶ್‌ ರಾವ್‌


ಹರ್ಷಾದ್‌ ವರ್ಕಾಡಿ | May 29, 2012

ಮಂಜೇಶ್ವರ : ಸೋಮವಾರದಂದು ನಿಧನ ಹೊಂದಿದ ಹಿರಿಯ ಗಾಂಧೀವಾದಿ ,ಸಮಾಜ ಸೇವಕ, ಮುತ್ಸದ್ಧಿ ಎನ್‌.ವೆಂಕಟೇಶ್‌ ರಾವ್‌(78) 'ವರ್ಕಾಡಿಯ ಶಿಲ್ಪಿ' ಎಂದೇ ಪ್ರಖ್ಯಾತಿ ಪಡೆದವರು. ವರ್ಕಾಡಿ ಎಂಬ ಊರನ್ನು ಅಗಾಧವಾಗಿ ಹಚ್ಚಿಕೊಂಡಿದ್ದ ಇವರು ಸುಮಾರು 20 ವರ್ಷಗಳ ಕಾಲ ಇಲ್ಲಿ ಗ್ರಾಮ ಸೇವಕರಾಗಿ ಜನಮನದಲ್ಲಿ ಪ್ರಿತಿ ಸೌಹಾರ್ದತೆಯ ಹಣತೆಯನ್ನು ಹಚ್ಚಿದವರು. ಬರಡು ಭೂಮಿಯಾಗಿದ್ದ ವರ್ಕಾಡಿಯನ್ನು ಸಂಪನ್ನಗೊಳಿಸಿದ್ದ ಕೀರ್ತಿ ವೆಂಕಟೇಶ್‌ ರಾವ್‌ರವರಿಗೇ ಸಲ್ಲಬೇಕು.

ಪಕ್ಕಾ ಗಾಂಧೀವಾದಿಯಾಗಿದ್ದ ವೆಂಕಟೇಶ್‌ರಾವ್‌ ತನ್ನ ಜೀವನದ ಕೊನೆಯ ಉಸಿರಿನ ತನಕವೂ ಗಾಂಧೀ ತತ್ವವನ್ನೇ ಉಸಿರನ್ನಾಗಿಸಿದ್ದರು. ಗಾಂಧೀ ಚಟುವಟಿಕೆಗಳೆಂದರೆ ಇವರಿಗೆ ಪಂಚಪ್ರಾಣ.ಕಳೆದ ತಿಂಗಳು ತಿರುವನಂತಪುರದಲ್ಲಿ ಜರುಗಿದ ಗಾಂಧೀ ಸ್ಮಾರಕ ನಿಧಿಯ ಕಾರ್ಯಕ್ರಮಕ್ಕೆ ವರ್ಕಾಡಿಯ ಯುವಕರನ್ನು ಸಂಘಟಿಸಿ ಕರೆದೊಯ್ದಿದ್ದು, ಇಳಿ ವಯಸ್ಸಿನಲ್ಲಿಯೂ ಪಾದರಸದಂತೆ ಓಡಾಡುತ್ತಿದ್ದರು. ಗಾಂಧೀ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಯುವಕರನ್ನು ಸಜ್ಜುಗೊಳಿಸಬೇಕೆಂಬ ಕನಸು ಹೊತ್ತಿದ್ದ ವೆಂಕಟೇಶ್‌ ರಾವ್‌ ಇನ್ನು ನೆನಪು ಮಾತ್ರ.

ಸಮಾಜ ಸೇವೆ..

ವರ್ಕಾಡಿಯಲ್ಲಿ ಗ್ರಾಮಸೇವಕರಾಗಿ ಕರ್ತವ್ಯ ನಿರ್ವಹಿಸಲು ಬಂದಂದಿನಿಂದ 1993ರ ತನಕ ವರ್ಕಾಡಿ ನಿವಾಸಿಯಾಗಿದ್ದ ವೆಂಕಟೇಶ್‌ ರಾವ್‌ 'ವರ್ಕಾಡಿ' ಎಂಬ ಉರನ್ನು ಜಗತ್ತಿನ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದ್ದರು. 'ಧರ್ಮನಗರ' ಎಂಬ ಕಾಲನಿಯನ್ನು ಸೃಷ್ಟಿಸಿ, ಸುಸಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಿದ್ದರು.1985ರಲ್ಲಿ ವರ್ಕಾಡಿಯಲ್ಲಿ ಕೃಷಿವಿಜ್ಞಾನ ಕೇಂದ್ರ ಪ್ರಾರಂಭಗೊಂಡಿದ್ದು, ವೆಂಕಟೇಶ್‌ರಾವ್‌ರವರ ಕೃಪಕಟಾಕ್ಷದಿಂದಲೇ ಎಂಬುದು ಅಕ್ಷರಶ: ಸತ್ಯ.ಅಂದಿನ ಮುಖ್ಯಮಂತ್ರಿಯಾಗಿದ್ದ ಕೆ.ಕರುಣಾಕರನ್‌ ಆ ಕೇಂದ್ರವನ್ನು ಉದ್ಘಾಟಿಸಿದ್ದರು. ವರ್ಕಾಡಿಯಲ್ಲಿ ಅನರ್ಟ್‌ ಸೌರ ಶಕ್ತಿ ಕೇಂದ್ರವನ್ನು ಪ್ರಾರಂಭಿಸುವಲ್ಲಿ ಅಹೋ ರಾತ್ರಿ ದುಡಿದು ಯಶಸ್ವಿಯಾಗಿದ್ದರು. ವರ್ಕಾಡಿ ಎಂಬ ಬರಡು ಭೂಮಿಯನ್ನು ಹಸಿರುಜನ್ಯವನ್ನಾಗಿಸಿದ ಇವರು ಈ ಪ್ರದೇಶದ ಜನರನ್ನು ಜಾತಿ,ಮತ,ಬೇಧವಿಲ್ಲದೆ ಸಂಘಟಿಸುವಲ್ಲಿ ತನ್ನ ಬದುಕಿನ ಬಹುಭಾಗವನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದರು. ವರ್ಕಾಡಿಗೆ ಬ್ಯಾಂಕಿಂಗ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಇಲ್ಲಿನ ಕೃಷಿಕರ ಆರ್ಥಿಕ ಸಬಲೀಕರಣಕ್ಕೆ ನೆರವಾದರು.ವರ್ಕಾಡಿ ಗ್ರಾಮ ಕಲಾ ಸೇವಾ ಸಂಘವನ್ನು ಸ್ಥಾಪಿಸಿ ಈ ಪ್ರದೇಶದ ಯುವಕರನ್ನು ಒಗ್ಗೂಡಿಸಿ, ಸಾಮಾಜಿಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಹುರಿದುಂಬಿಸಿದರು. 70ರ ದಶಕದಲ್ಲಿ ಇವರ ಸಾರಥ್ಯದಲ್ಲಿ ನಡೆಯುತ್ತಿದ್ದ 'ಸಾರ್ವಜನಿಕ ಶ್ರಿ ಸತ್ಯನಾರಾಯಣ ಪೂಜೆ' ಆ ಕಾಲದಲ್ಲಿಯೇ ಜಾತಿ, ಮತ, ಬೇಧವಿಲ್ಲದೇ ಎಲ್ಲರೂ ಪಾಲ್ಗೊಳ್ಳತ್ತಿದ್ದರು. ಅಸಹಾಯಕರಿಗೆ ಸದಾ ನೆರವಾಗುತ್ತಿದ್ದ ಇವರು ರಾಜಕೀಯ ರಂಗದಲ್ಲಿಯೂ ಸಕ್ರಿಯರಾಗಿದ್ದರು. ಮೂಲತ: ನೀಲೆಶ್ವರ ನಿವಾಸಿಯಾಗಿದ್ದು, 1960ರ ಕಾಲಘಟ್ಟದಲ್ಲಿ ವರ್ಕಾಡಿಯಲ್ಲಿ ಗ್ರಾಮ ಸೇವಕರಾಗಿ ಸೇವೆ ಆರಂಭಿಸಿ 200 ಎಕರೆಯಷ್ಟು ಬರಡು ಭೂಮಿಯಲ್ಲಿ 80ಕ್ಕೂ ಮಿಕ್ಕಿದ ಕುಟುಂಬಗಳಿಗೆ ವಸತಿ ಸೌಕರ್ಯಭಾಗ್ಯ ಒದಗಿಸಿಕೊಟ್ಟಿದ್ದರು. ಸಾಕ್ಷರತಾ ಆಂದೋಲನದಲ್ಲಿಯೂ ತನ್ನ ವಿಶಿಷ್ಟ ಚಾಪು ಮೆರೆದ ರಾಯರು ಪ್ರಥಮ ಸಾಕ್ಷರತಾ ಆಂದೋಲನಾ ಜಾಥವನ್ನು ರಾಜ್ಯಾದಾದ್ಯಂತ ಅವರು ನಡೆಸಿದ್ದರು. ಇಡೀ ಭಾರತದಲ್ಲಿಯೇ ಪ್ರಥಮ ಎಂಬಂತೆ 1977ರಲ್ಲಿ ಅವರು ತನ್ನ ನೆಚ್ಚಿನ ವರ್ಕಾಡಿಯಿಂದ ಪ್ರಾರಂಭಿಸಿದ್ದ ಈ ಜಾಥಾ ಬಳಿಕ ಸಾಕ್ಷರತಾ ಕ್ರಾಂತಿಗೆ ನಾಂದಿಯಾಯಿತು. 1975ರಲ್ಲಿ ವರ್ಕಾಡಿಯಲ್ಲಿ ಅವರು ಪ್ರಾರಂಭಿಸಿದ್ದ ವನಿತಾ ವಿಚಾರ ವಿನಿಮಯ ಕೇಂದ್ರ ಮಹಿಳಾ ಸಬಲೀಕರಣಕ್ಕೆ ಸ್ಪೂರ್ತಿಯಾಯಿತು.

ಸಾಹಿತ್ಯ

ವರ್ಕಾಡಿ ಎಂಬ ಗ್ರಾಮಕ್ಕೆ ಮಾಂತ್ರಿಕ ಸ್ಪರ್ಷವನ್ನು ನೀಡಿದ ವೆಂಕಟೇಶ್‌ರಾಯರು ಬರವಣಿಗೆಯಲ್ಲಿಯೂ ಎತ್ತಿದ ಕೈ. 'ಹ್ಯಾಂಡ್ಸ್‌ ಆಫ್‌ ಗಾಡ್‌' ಎಂಬ ಇವರ ಆತ್ಮಕಥನ ಆಂಗ್ಲ ಹಾಗೂ ಮಲೆಯಾಳಂ ಭಾಷೆಯಲ್ಲಿ ಪ್ರಕಟಗೊಂಡಿತ್ತು. ಇದಕ್ಕೆ ರಾಷ್ಟಿÅàಯ ಪುರಸ್ಕಾರವೂ ದೊರೆತಿತ್ತು. ಬದುಕಿನ ಉತ್ತರಾರ್ಧದಲ್ಲಿ ಅವರು ಹಲವು ಪ್ರಮುಖ ಕೃತಿಗಳ ಭಾಷಾಂತರ ಸಿದ್ದತೆಯಲ್ಲಿದ್ದರು. ಸುಮಾರು ದೇವಸ್ಥಾನಗಳ ಚರಿತ್ರೆಯನ್ನು ಅವರು ಕೊಂಕಣಿ, ಮಲೆಯಾಳಂಗೆ ಭಾಷಾಂತರ ಮಾಡಿದ್ದರು.ಪಾಂಚಜನ್ಯ, ಶೀÅಮದ್‌ಭಗವದ್ಗಿತಾ ಕಾವ್ಯವನ್ನು ಮಲೆಯಾಳಂನಿಂದ ಕನ್ನಡಕ್ಕೆ ಭಾಷಾಂತರಿಸುವ ಕಾಯಕದಲ್ಲಿದ್ದರು. ಡಾ.ಪಿ.ಎಸ್‌.ನಾಯರ್‌ರವರ 'ಭಗವದ್ಗಿತೆ' ಗದ್ಯ,' ಮಹಾ ಭಾಗವತಾ' ಗ್ರಂಥದ ಅನುವಾದ ಕಾರ್ಯ ಅಂತಿಮ ಹಂತದಲ್ಲಿರುವಾಗಲೇ ಅವರು ನಮ್ಮನಗಲಿದ್ದಾರೆ.ವಿಶ್ರಾಂತಿ ಕಾಲದಲ್ಲಿಯೂ ಅಧ್ಯಯನ, ಪ್ರಯಾಣದಲ್ಲಿಯೇ ಮುಳುಗಿಹೋಗಿದ್ದ ರಾಯರು ತನ್ನ ಆರೋಗ್ಯಕ್ಕಿಂತ ಮಿಗಿಲಾಗಿ ವರ್ಕಾಡಿ ಊರನ್ನು ಜತನದಿಂದ ಕಾಣುತ್ತಿದ್ದರು. ವರ್ಕಾಡಿಯನ್ನು ಬಿಟ್ಟು ತರಳಿ 20 ವರ್ಷಗಳೇ ಸಂದರೂ ಈ ಗ್ರಾಮವನ್ನು ನಿತ್ಯಶ್ಲೋಕವೆಂಬಂತೆ ಸ್ಮರಿಸುತ್ತಿದ್ದರು.

ಸಜ್ಜನಿಕೆಯ ಸಾಕಾರ ಮೂರ್ತಿ

ಸಮಾಜ ಸೇವೆ, ಗಾಂಧೀವಾದವನ್ನೇ ತನ್ನ ಜೀವಾಳವೆಂದು ಬಗೆದಿದ್ದ ರಾಯರು ತನ್ನ ಕುಟುಂಬದವರಿಗಿಂತಲೂ ಮಿಗಿಲಾಗಿ ವರ್ಕಾಡಿ ಜನತೆಯನ್ನು ಪ್ರಿತಿಸುತ್ತಿದ್ದರು. ಎಚ್‌ಐವಿ ಬಾಧಿತರ ಪರ ಹೋರಾಟ ಮಾಡಿ ಅಂತಾರಾಷ್ಟ್ರಿಯ ಗಮನವನ್ನು ಸೆಳೆದಿದ್ದ ದಿ.ವೀಣಾಧರಿಯವರ ತಂದೆಯಾದ ಎನ್‌.ವೆಂಕಟೇಶ್‌ರಾವ್‌ ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು.ಯಾರಿಗೂ ನೋವುಂಟಾಗದ ರೀತಿಯಲ್ಲಿ ತನ್ನ ಬದುಕಿನ ಕೊನೆಯ ಕ್ಷಣದವರೆಗೂ ಬದುಕು ಸವೆಸಿದ ವೆಂಕಟೇಶ್‌ರಾವ್‌ ಇನ್ನು ನಮಗೆ ನೆನಪು ಮಾತ್ರ. 78ರ ಹರೆಯದ ಖಾದೀ ವಸ್ತ್ರಧಾರಿ ವೆಂಕಟೇಶ್‌ರಾವ್‌ ಚಲಿಸುವ ವಿಶ್ವವಿದ್ಯಾಲಯದಂತೆ ಅಗಾಧವಾದ ಪಾಂಡಿತ್ಯ ಹಾಗೂ ವೈದಿಕ ಜ್ಞಾನವನ್ನು ಹೊಂದಿದ್ದರು. ಯೋಗ ಪ್ರಕೃತಿ ಚಿಕಿತ್ಸೆಯ ಜತೆಗೆ ಗಾಂಧೀ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಮಾತುಗಾರಿಕೆಯೆಂದರೆ ಇವರಿಗೆ ಬಲು ಇಷ್ಟ. ಮಹಾತ್ಮಾ ಗಾಂಧೀಯವರ ಗ್ರಾಮ ಸ್ವರಾಜ್ಯದ ಸಾಫಲ್ಯತೆಗೆ ತನ್ನ ಬದುಕಿನ ಬಹುಭಾಗವನ್ನು ವ್ಯಯಿಸಿ, ಸರಳ ಬದುಕನ್ನು ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿದಾಯಕರಾಗಿ ಬದುಕಿದ ವೆಂಕಟೇಶ್‌ರಾಯರು ತನ್ನ ಪುತ್ರಿ ವೀಣಾಧರಿಯ ಅಗಲಿಕೆಯ ಬಳಿಕ ತುಂಬಾ ಖನ್ನರಾಗಿದ್ದರು.

ಮಹಾತ್ಮಾ ಗಾಂಧೀಜಿಯವರ 18 ಅಂಶಗಳ ಸೂತ್ರವನ್ನು ಗಾಂದೀ ಸ್ವರಾಜ್ಯ ಅನುಷ್ಠಾನಕ್ಕೆ ಬಳಸಿಕೊಂಡು ಬಡಜನತೆಗೆ ಕೃಷಿಯಿಂದ ಜೀವನ ನಿರ್ವಹಣೆಯ ಪಾಠವನ್ನೂ ಹೇಳಿಕೊಟ್ಟರು.ಪ್ರಾರಂಭದಲ್ಲಿ ವರ್ಕಾಡಿಯ ಗುಡ್ಡದಲ್ಲಿ ಗೇರು ತೋಟ ಸ್ಥಾಪಿಸುವ ಮೂಲಕ ಹಸಿರು ಚಳುವಳಿಯನ್ನು ಪರಿಚಯಿಸಿದ್ದ ರಾಯರು ತನ್ನ ಕೊನೆ ಘಳಿಗೆಯವರೆಗೂ ಸದಾ ಪ್ರವಾಸ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು , ಸರಕಾರಿ ಸೇವಾವಧಿಯಲ್ಲಿ ಭ್ರಷ್ಟಾಚಾರಗಳೊಂದಿಗೆ ರಾಜಿ ಮಾಡಿಕೊಳ್ಳದೆ ಗ್ರಾಮ ಸೇವಕ ಹುದ್ದೆಗೂ ತಿಲಾಂಜಲಿ ನೀಡಿ ,ಪಿಂಚಣಿಯನ್ನು ತ್ಯಾಗ ಮಾಡಿದ ಈ ವ್ಯಕ್ತಿಯ ಜನಪರ ಕಾಳಜಿಯ ಕಾರ್ಯಕ್ರಮಕ್ಕೆ ಅದೆಷ್ಟೋ ಮಂದಿ ಊರುಗೋಲಾಗಿದ್ದರು.

ನೆನಪಿನಂಗಳದಲ್ಲಿ ರಾಯರು....

ಗಾಂದೀ ಆದರ್ಶವನ್ನು ಮೈಗೂಡಿಸಿಕೊಂಡು, ಗಾಂದೀ ಚಳುವಳಿ, ಸರ್ವೋದಯ ಚಳುವಳಿಯಲ್ಲಿ ತನ್ನನ್ನು ತೊಡಗಿಸಿಕೊಂಡು, ವಿನೋಬಾ ಬಾವೆಯವರು ಮಂಜೇಶ್ವರದಿಂದ ಪ್ರಾರಂಭಿಸಿದ್ದ ಶಾಂತಿ ಸೇನೆಯ ಹರಿಕಾರರಾಗಿ ,ನಿಸ್ವಾರ್ಥವಾದ ಸಮಾಜ ಸೇವೆಗೆ ಮರು ವ್ಯಾಖ್ಯಾನವನ್ನು ನೀಡಿದ ವೆಂಕಟೇಶ್‌ರಾವ್‌ ಇನ್ನು ನಮಗೆ ನೆನಪು ಮಾತ್ರ. ಆದರೆ ಅವರು ಬದುಕಿದ ಶೈಲಿ, ಅವರ ಹೋರಾಟದ ಕಾವುಗಳು, ಅವರ ದೂರದೃಷ್ಟಿ¤Ìದ ಚಿಂತನೆಗಳು, ಅವರು ಬಿಟ್ಟು ಹೋದ ಪ್ರಿತಿಯ ಪಾಠಗಳು ನಿತ್ಯ ಶಾಶ್ವತ.ಪತ್ನಿ ಲಲಿತಾ ರಾವ್‌ ವೆಂಕಟೇಶ್‌ರಾಯರ ಪಯಣಕ್ಕೆ ಬೆಂಗಾವಲಾಗಿ ನಿಂತವರು. ಮಕ್ಕಳಾದ ದೇವಿಪ್ರಸಾದ್‌, ಸುದಾ, ಶಿವಪ್ರಕಾಶ್‌, ಬಾಲಾಜಿರಾವ್‌, ರಾಜೇಂದ್ರ ತಂದೆಯ ನೆರಳಿನಲ್ಲಿಯೇ ಇದ್ದುಕೊಂಡು ತಂದೆಯ ಪಯಣಕ್ಕೆ ಸಾಥ್‌ ಕೊಟ್ಟ ವರು.. ದೇಶದಾದ್ಯಂತವಿರುವ ಗಾಂಧೀ ಅನುಯಾಯಿಗಳ ಜತೆ ಅಗಾಧ ಸಂಭಂಧವನ್ನು ಹೊಂದಿದ್ದ ರಾಯರು ನಮ್ಮ ನಡುವೆ ಚಿರ ಸಂದೇಶವನ್ನು ಬಿಟ್ಟಹೋಗಿದ್ದಾರೆ. ಅಗಲಿದ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸೋಣ..