Tuesday, January 22, 2013

 

ನನಗೊಂದಿಷ್ಟು ಮರು ಜೀವ ನೀಡಿ...!

  -  ಹರ್ಷಾದ್  ವರ್ಕಾಡಿ

ಹಳೆ ಸ್ಮಶಾನವದು...ಹಳೇ ಗೋರಿಗಳವು ....
ಸ್ಮಶಾನದೊಳಗೆ ಸ್ಮಾರಕವಾಗದ ಗೋರಿಯ ಮುಂದೆ ಎರಡೂ ಕೈಗಳನ್ನು ಹಿಡಿದು ಸುಮ್ಮನೆ ನಿಂತಿದ್ದೇನೆ...ಸ್ಮಶಾನವೆಂದರೆ  ಅಲ್ಲಿ ವಿಚಿತವಾದ ವಾಸನೆ ಇರಬೇಕಲ್ಲಾ? ಆದ್ರೆ ಅಲ್ಲಿ ವಾಸನೆಯೂ ಇಲ್ಲ, ಅಗರಬತ್ತಿಯ ಪರಿಮಳವೂ ಇಲ್ಲ..ದತ್ತ ಮರಗಳಿವೆ.ಕಪ್ಪು ನೆರಳೂ ಇದೆ. ಜತೆಗೆ ಬೆಳದಿಂಗಳ ಬೆಳಕು ಧಾರಾಳ ಇದೆ..ತರಗೆಲೆಗಳಿಗೇನೂ  ಕಮ್ಮಿಯಿರಲಿಲ್ಲ..ಸಿಮೆಂಟು ಹಾಸಿದ ಗೋರಿಯ ಮೇಲೆ ತರಗೆಲೆಗಳೂ ಹಾಯಾಗಿ ಬಿದ್ದಿದೆ..

ಅದೊಂದು ಸ್ಮಶಾನ...ಅಲಿ ತಲೆಬುರುಡೆ ಇರಲಿಲ್ಲ..ಯಾಕೆಂದರೆ ಅದು ಹಳೆ ಸ್ಮಶಾನ.ರುದ್ರಭೂಮಿಯೂ ಅದೇ..ಆದರೆ ಕೆಲ ವರ್ಷಗಳಿಂದ ಅಲ್ಲಿ ಯಾರೂ ಹೊಸಬ್ಬರನ್ನು ಹೂಳಲಿಲ್ಲ.ರಾತ್ರಿಯಾದರೂ ಬೆಳದಿಂಗಲಿದ್ದುದರಿಂದ ನನಗೆ ಹೆದರಿಕೆಯಾಗಲಿಲ್ಲ.. ಯಾಕೆಂದರೆ ಹಳೆ ಸ್ಮಶಾನದಲ್ಲಿ ಬಹುಷ: ಪ್ರೇತಗಳಿರಲಿಕ್ಕಿಲ್ಲ ..ಪ್ರೇತಗಳೂ ಸತ್ತಿರಬಹುದು...ಇಲ್ಲವೇ ಹೊಸಬ್ಬರೂ ಯಾರೂ ಬರದೇ ಇದ್ದಾರೆ ಪ್ರೇತಗಳೂ ವಲಸೆ ಹೋಗಿರಬಹುದು..ಗೂಬೆ ಕರಿಬೆಕ್ಕು ಕೂಡ ಇರಲಿಲ್ಲ... 'ಸತ್ತ ಮನುಷ್ಯರನ್ನು ಹೂಳುವ, ಸುಡುವ ಜಾಗವನ್ನು ಸ್ಮಶಾನವೆನ್ನುತ್ತೇವೆ' ಎನ್ನುವ ವಾಕ್ಯ ನನ್ನ ಕಿವಿಯೊಳಗೆ ಮಾರ್ದನಿಸಿತು..
ಈ ದೇವರ ಮೇಲೆ ನಂಬಿಕೆ ಇಟ್ಟವರು ಸ್ಮಶಾನ ,ಗೋರಿಗಳಿಗೆ ಹೆದರುತ್ತಾರೆ..ಯಾಕೆಂದರೆ ಸತ್ತವರು ಇನ್ನೂ ಅಲ್ಲಿಯೇ ಮಲಗಿರುತ್ತಾರೆನ್ನುವ ಭ್ರಮೆಯಿಂದ...
ನಿದ್ರಾರಹಿತ ರಾತ್ರಿಯಲ್ಲಿ ನಾನು ಆ ಕತ್ತಲನ್ನು ಸೀಳಿ  ಒಂಟಿಯಾಗುತ್ತೇನೆ..
ಸ್ಮಶಾನದಲ್ಲಿ ಹಾವು ಸುಳಿದಾಡುವುದಿಲ್ಲವೆಂದು ಯಾರೋ ಹೇಳಿದ್ದು ನೆನಪಾಯಿತು..
ದೂರದಿಂದ ತೋಳಗಳ ವಿಷಣ್ಣ ಕೂಗು ಕೇಳಿ ಬರುತ್ತಿತ್ತು.
ದಿನದ ತೊಂದರೆ ,ಜಗಳ, ದುಡಿಮೆ,ಕಲಹವನ್ನು ಮುಗಿಸಿ ಜೀವಂತ ಮನುಷ್ಯರೂ ಅಂದು ರಾತ್ರಿ ಪ್ರಾರ್ಥನೆಯೊಂದಿಗೆ ಮಲಗಿ ನಿದ್ರಿಸುತ್ತಾರೆ.ಜಗತ್ತೇ ನಿದ್ರಿಸತೊಡಗುತ್ತದೆ... ನಿದ್ರಾ ಲೋಕ ...ಆದರೆ ಸ್ಮಶಾನದಲ್ಲಿ  ನಿದ್ದೆಯ ಪುನರಾವರ್ತನೆಯಿಲ್ಲ ...ಅದು ಶಾಶ್ವತವಾದ ನಿದ್ದೆ...ಅಲ್ಲಿ ಮಲಗಲು ಸಂಪನ್ನರಾದವವರು ಮೊದಲೇ ದುಡ್ಡು ಕೊಟ್ಟು ಸ್ಥಳ ಕಾಯ್ದಿರಿಸುತ್ತಾರೆ..ಕೆಲವರಿಗೆ ಅದೂ ಇಲ್ಲ..ಮುಕ್ತವಾಗಿ ಮಲಗುವ ಅವಕಾಶ...ಮುಕ್ತವಾದ ಸ್ವಾತಂತ್ರ್ಯ ...
ಹಕ್ಕಿಗಳಿಗೆ ಸ್ಮಶಾನವಿಲ್ಲ...ಈ ಹಕ್ಕಿಗಳು ಸತ್ತು ಕೆಳ ಬೀಳುವುದನ್ನು ನಾನು ಕಂಡಿಲ್ಲ...ಮಹಾ ಯುದ್ಧದಲ್ಲಿ ಸತ್ತವರಿಗೆ ಸ್ಮಶಾನವೇ ಸುಖ..
ದೂರದಲ್ಲೆಲ್ಲೋ ನಿಂತು ಸ್ಮಶಾನ , ಗೋರಿಗಳನ್ನು ಹೀಯಾಳಿಸಬೇಡಿ.. ನಿಮಗರಿವಿಲ್ಲದಂತೆ ನಿಮ್ಮನ್ನು ಹೊತ್ತು ತಂದು ಹಾಕುತ್ತಾರೆ..
ಮತ್ತೆ ಅದೇ ಅಗರಬತ್ತಿ..ಹೂಗುಚ್ಛ..ಕುರುಚಲು ಗಿಡದ ಗೆಲ್ಲುಗಳು..ಗುಂಡಿಯೊಳಗೆ ಮಲಗಿಸಿ ಮಣ್ಣು ಹಾಕುತ್ತಾರೆ.ಕೆಲವರನ್ನು ಸುಡುತ್ತಾರೆ...ಸಿಮೆಂಟು ಸವರಿ ತೆರಳುತ್ತಾರೆ..ಅಲ್ಲಿಗೆ ಅವರ ಡ್ಯೂಟಿ ಮುಗಿಯಿತು..ಸತ್ತವರದ್ದು ಮತ್ತು ಹೂತವರದ್ದು...ಈ ಜಗತ್ತೇ ಹಾಗೆ..ಹೆಣ್ಣು ನೋಡಿ ಉಗುಳು ನುಂಗುತ್ತಾರೆ..ಹಣ್ಣು ನೋಡಿ ಬಾಯಿ ಚಪ್ಪರಿಸುತ್ತಾರೆ...ಸ್ಮಶಾನ ನೋಡಿ ಯಾರೂ ಸಾಯಬಯಸುವುದಿಲ್ಲ..ಯಾಕೆಂದರೆ ಸ್ಮಶಾನದಲ್ಲಿ ಪ್ರೇತಗಳಿವೆಯಂತೆ ...ಭಯ..
ಸ್ಮಶಾನದೊಳಗೆ ಅದೊಂದು ಸಮಾಧಿ ಬಲಿ ಕೂತೆ...
      ಎಡ್ವರ್ಡ್ ಬ್ಲೇರ್           ಜನನ : 20&08&1817               ನಿಧನ :18&01&1862
ಮೇಲಿನ ದಿನಾಂಕ ಬರೆದಿರುವುದು   ಸತ್ತವರಿಗೆ ಓದಲಿಕ್ಕಲ್ಲ..ಸಾಯಲಿಕ್ಕಿರುವವರಿಗೆ...ಅರ್ಥಾತ್ ಅದನ್ನು ಓದುವವರಿಗೆ..ಇದೀಗ ನನಗೆ..
ನಾನು ಸತ್ತರೆ ನನ್ನ ಸಮಾಧಿಯನ್ನು ಎತ್ತರಕ್ಕೆರಿಸಿ ಕಟ್ಟಬೇಕು...ಮಳೆ ನೀರು ಒಳ ನುಗ್ಗದಂತೆ...
ಯಾರಾದರೂ ಹೂವು ಚೆಲ್ಲಬಹುದು...
ಇನ್ನು ಕೆಲವರೋ ಮೋಂಬತ್ತಿ ಉರಿಸಬಹುದು..
ಕೆಲವರು ಕಣ್ಣೀರು ಸುರಿಯಬಹುದು..
..ಪ್ಲೀಸ್ ಆವಾಗ ನನಗೊಂದಿಷ್ಟು ಮರುಜೀವ ನೀಡು ಒಡೆಯನೇ ..ಅವರಿಗೊಂದು ಥ್ಯಾಂಕ್ಸ್ ಹೇಳಲು.