Saturday, December 25, 2010

ಅನಂತ ಮೂರ್ತಿ ಹುಟ್ಟು ಹಬ್ಬ ....





ಮೊನ್ನೆ ಅನಂತ ಮೂರ್ತಿ ಹುಟ್ಟು ಹಬ್ಬ ..ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಮುಸ್ಸಂಜೆ ಒಂದು ಕಾರ್ಯಕ್ರಮವಿತ್ತು..ಗುರುಗಳ ಹುಟ್ಟು ಹಬ್ಬದಂದೇ ಪಟ್ಟಾಭಿ ರಾಮ ಸೋಮಾಯಾಜಿ ತನ್ನ ಮದುವೆಯ ತಣವೂ ಏರ್ಪಡಿಸಿದ್ದರು...ಜತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ...ಕಾಲೇಜಿನ ವರಾಂಡದಲ್ಲಿ ಅನಂತಮೂರ್ತಿ ಅಭಿಮಾನಿಗಳು ನೆರೆದಿದ್ದರು.ಸಭಾ ಕಾರ್ಯಕ್ರಮ ಮುಗಿಯುತ್ತಲೇ ಭರ್ಜರಿ ಊಟ...ಅನಂತಮೂರ್ತಿಯವರು ತನ್ನ ಪತ್ನಿ ಎಸ್ತೆರ್ ಜತೆ ಊಟದ ಸವಿಯನ್ನು ಉಂಡರು..ಅದಾದ ಬಳಿಕ ಶಶಿಕಾಂತ್ ರವರಿಂದ ಸುಗಮ ಸಂಗೀತ ಧಾರೆ..ಇಡೀ ಕಾರ್ಯಕ್ರಮದಲ್ಲಿ ಅನಂತಮೂರ್ತಿ ಮತ್ತು ಪಟ್ಟಾಭಿ ದಂಪತಿ ಕೇಂದ್ರ ಬಿಂದು..
ಅನಂತ ಮೂರ್ತಿಗೆ ೭೯ ದಾಟಿದರೂ ಇನ್ನೂ ಲವಲವಿಕೆಯಲ್ಲಿರುವುದನ್ನು ನೋಡಿ ನಿಜಕ್ಕೂ ಅಚ್ಚರಿಯಾಯಿತು... ಜತೆಗೆ ಅವರ ಚಿಂತನಾ ಲಹರಿ ಅದ್ಭುತ."ಧಾರ್ಮಿಕ ಭಾರತದ ಕನಸು ಕಂಡಿದ್ದೇನೆ ಹೊರತು ಕೋಮು ಭಾರತವನ್ನಲ್ಲ..ಗಂಧದ ಗುಡಿಯ ನಾಡಾದ ಕನ್ನಡಾಂಬೆಯನ್ನು ಲೂಟಿಮಾಡಿ ನಮ್ಮ ರಾಜಕಾರಣಿಗಳು ಹಣ ಆಸ್ತಿ ಮಾಡುವುದರಲ್ಲಿ ತೊಡಗಿದ್ದರೆ, ಹಾಗೆಯೇ ಮಠಾಧೀಶರೂ ಕೂಡ ಭೂಗಳ್ಳರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಕಿಡಿಕಾರಿದ್ದು, ಹಿಂದೆ ಭಾರತದಲ್ಲಿ ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸರಂಥವರು ಧರ್ಮದ ಪರಂಪರೆಯನ್ನು ಹುಟ್ಟುಹಾಕಿದ್ದರು. ಆದರೆ ಇಂದು ನಮ್ಮ ಮಠಗಳ ಯಾವ ಸ್ವಾಮಿಗಳೂ ಧರ್ಮದ ಪರಂಪರೆ ಉಳಿಸಿಕೊಂಡಿಲ್ಲ ಎಂಬುದು ಮೂರ್ತಿಯವರ ವಾದ.. ರಾಷ್ಟ್ರೀಯತೆ ಎನ್ನುವುದು ಅಪಾಯಕಾರಿ. ಇತಿಹಾಸದಲ್ಲಿ ರಾಷ್ಟ್ರೀಯತೆ ಹುಚ್ಚು ಅನೇಕ ಯುದ್ಧಗಳನ್ನು ಮಾಡಿಸಿದೆ. ಕಾಶ್ಮೀರದಲ್ಲಿಯೂ ಇದೇ ಆಗುತ್ತಿದೆ. ಅಲ್ಲಿನ ಜನರನ್ನು ಮೈಲಿಗೊಮ್ಮೆ ಐಡೆಂಟಿಡಿ ಕಾರ್ಡ್ ತೋರಿಸಿ ಅಂತ ಹೇಳಿ ಅವರ ರಾಷ್ಟ್ರೀಯತೆಯನ್ನು ಪರೀಕ್ಷೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಅವರಲ್ಲಿ ಬೆಳೆಸಬೇಕಾದದ್ದು ದೇಶಭಕ್ತಿಯೇ ಹೊರತು ಸಂಕುಚಿತವಾದ ರಾಷ್ಟ್ರೀಯತೆ ಅಲ್ಲ ಎಂಬುದು ಅನಂತ ಮೂರ್ತಿ ನಿಲುವಾಗಿತ್ತು..ತನ್ನ ಭಾಷಣದಲ್ಲಿ ರಾಜಕಾರಣಿಗಳ ಮೊಂಡು ರಾಷ್ಟ್ರೀಯತೆಯನ್ನು ಛೇಡಿಸಿದರು.